ಕೊಡುಗೆ ತೆರಿಗೆ

ಕೊಡುಗೆಗಳ ಮೇಲೆ ಹಾಕಲಾಗುವ ತೆರಿಗೆ (ಗಿಫ್ಟ್ ಟ್ಯಾಕ್ಸ್) ಇದು ಬಹಳ ಈಚಿನ ಕಾಲದ್ದು. ಭಾರತದಲ್ಲಿ ಈ ತೆರಿಗೆಯನ್ನು 1958ರ ಕೊಡುಗೆ ತೆರಿಗೆ ಕಾಯಿದೆಯನ್ವಯ ಹಾಕಲಾಗುತ್ತದೆ. ಇಂಥ ತೆರಿಗೆಯನ್ನು ವಿಧಿಸುವಂತೆ 1953ರಲ್ಲಿಯೇ ಅನೇಕ ಅರ್ಥಶಾಸ್ತ್ರಜ್ಞರು ಭಾರತದ ತೆರಿಗೆ ವಿಚಾರಣಾ ಸಮಿತಿಗೆ ಸೂಚಿಸಿದ್ದರು. ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಭಾರತದ ತೆರಿಗೆಗಳ ಸ್ವರೂಪವನ್ನು ಪರಿಶೀಲಿಸಿದ ಅರ್ಥಶಾಸ್ತ್ರಜ್ಞ ಕಾಲ್ಡಾರ್ ಕೂಡ 1955ರಲ್ಲಿ ಈ ರೀತಿ ಸಲಹೆ ಮಾಡಿದ್ದುಂಟು. ಭಾರತದಲ್ಲಿ ಈ ಕಾಯಿದೆ ಜಾರಿಗೆ ಬರುವುದಕ್ಕೂ ಮುಂಚೆಯೇ ಇಂಥ ಕಾಯಿದೆಗಳು ಅಮೆರಿಕ, ಕೆನಡ, ಜಪಾನ್, ಆಸ್ಟ್ರೇಲಿಯ ನ್ಯೂಜಿûಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಜಾರಿಗೆ ಬಂದಿದ್ದುವು.

	ಮೃತನ ಸ್ವತ್ತಿನ ಮೇಲೆ ಆತನ ಮರಣೋತ್ತರದಲ್ಲಿ ಹಾಕಲಾಗುವ ಕರ, ಆದಾಯ ತೆರಿಗೆ, ಸಂಪತ್ತಿನ ಮೇಲೆ ಹಾಕಲಾಗುವ ತೆರಿಗೆ, ವೆಚ್ಚಗಳ ಮೇಲಣ ತೆರಿಗೆ ಇವೇ ಮುಂತಾದ ತೆರಿಗೆಗಳನ್ನು ಕೊಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸ್ವತ್ತಿನ ಭಾಗವನ್ನೋ ಆದಾಯದ ಭಾಗವನ್ನೋ ಕೊಡುಗೆಯ ರೂಪದಲ್ಲಿ ಹಸ್ತಾಂತರಿಸಲಾಗುತ್ತಿದ್ದುದನ್ನು ಗಮನಕ್ಕೆ ತಂದುಕೊಂಡು, ಇದನ್ನು ತಡೆಗಟ್ಟಲು ಕೊಡುಗೆ ತೆರಿಗೆ ಕಾಯಿದೆಯನ್ನು ಜಾರಿಗೆ ತರಬೇಕಾಯಿತು.

	ಕೊಡುಗೆ ಶಬ್ದದ ಬಗ್ಗೆ ಕೊಡುಗೆ ತೆರಿಗೆ ಕಾಯಿದೆಯಲ್ಲಿ ನೀಡಲಾಗಿರುವ ವ್ಯಾಖ್ಯೆ ಸ್ವತ್ತು ವರ್ಗಾವಣೆ ಕಾಯಿದೆಯಲ್ಲಿ ನೀಡಲಾದ ವ್ಯಾಖ್ಯೆಗಿಂತ (ನೋಡಿ- ಕೊಡುಗೆ) ಸ್ವಲ್ಪ ಭಿನ್ನವಾಗಿದೆ ಮತ್ತು ಹೆಚ್ಚು ವ್ಯಾಪಕವಾಗಿದೆ. ಪ್ರತಿಗ್ರಹಿ ಕೊಡುಗೆಯನ್ನು ಸ್ವೀಕರಿಸುವನೋ ಇಲ್ಲವೋ ಎಂಬುದನ್ನು ಈ ಕಾಯಿದೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ದಾನಿ ತನ್ನ ಸ್ವತ್ತಿನ ಮೌಲ್ಯವನ್ನು ಕಡಿತಗೊಳಿಸುವ ಮತ್ತು ಬೇರೊಬ್ಬನ ಸ್ವತ್ತಿನ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳುವ ಯಾವುದೇ ಕ್ರಮವನ್ನು ಕೂಡ ಈ ಕಾಯಿದೆ ಕೊಡುಗೆ ಎಂದು ಪರಿಗಣಿಸುತ್ತದೆ. ಈ ಕಾಯಿದೆಯ ಇನ್ನೊಂದು ವಿಶೇಷವೆಂದರೆ, ಪ್ರತಿಗ್ರಹಿಯ ಅಸ್ತಿತ್ವ ಮತ್ತು ಅನುಮತಿ ಎರಡನ್ನೂ ಇದು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಮೂಲತಃ ಎರಡು ಕಾರಣಗಳು ಉಂಟು. ಮೊದಲನೆಯದಾಗಿ, ದಾನಿಯೇ ಕೊಡುಗೆ ತೆರಿಗೆಯನ್ನು ಸಂದಾಯ ಮಾಡಬೇಕಾಗಿರುವುದು; ಎರಡನೆಯದಾಗಿ ದಾನಿ ಅನೇಕ ತೆರಿಗೆಗಳಿಂದ ತಪ್ಪಿಸಿಕೊಳ್ಳುವುದನ್ನು ತಡೆಗಟ್ಟಲು ಈ ತೆರಿಗೆಯನ್ನು ಹಾಕಿರುವುದು. 

ದಾನಿಯಿಂದ ಈ ತೆರಿಗೆಯನ್ನು ಪಡೆಯಲು ಸಾಧ್ಯವಿಲ್ಲದಿದ್ದಾಗ ಮಾತ್ರ ಕೊಡುಗೆಯ ಪ್ರತಿಗ್ರಹಿಯಿಂದ ಅದನ್ನು ಪಡೆಯಬಹುದು. ವೃತನ ವಿಧಿಸಮ್ಮತ ಪ್ರತಿನಿಧಿ ಈ ತೆರಿಗೆಯನ್ನು ಸಂದಾಯ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅವನು ಹಿಂದೂ ಅವಿಭಕ್ತ ಕುಟುಂಬದ ಸದಸ್ಯನಾಗಿದ್ದು, ಕುಟುಂಬ ವಿಭಜನೆಯಾಗಿದ್ದರೆ, ಅಂಥ ಕುಟುಂಬದ ಸರ್ವಸದಸ್ಯರೂ ವ್ಯಕ್ತಿಗತವಾಗಿ ಮತ್ತು ಸಂಯುಕ್ತವಾಗಿ ತೆರಿಗೆಯನ್ನು ಸಂದಾಯಮಾಡಲು ಹೊಣೆಯಾಗಿರುತ್ತಾರೆ.
ಈ ಕಾಯಿದೆಯನ್ವಯ ಸಣ್ಣ ಗಾತ್ರದ ಕೊಡುಗೆಗಳ ಮೇಲೆ ತೆರಿಗೆ ಹಾಕಲಾಗುವುದಿಲ್ಲ. ತೆರಿಗೆಯ ದರ, ತೆರಿಗೆಯನ್ನು ನಿರ್ಧರಿಸುವ ಮತ್ತು ವಸೂಲಿ ಮಾಡುವ ಕಾಲ ಮತ್ತು ವಿಧಾನಗಳು, ವಿನಾಯಿತಿಗಳು ಮುಂತಾದ ಅನೇಕ ವಿಷಯಗಳನ್ನು ಈ ಕಾಯಿದೆಯಲ್ಲಿ ಅಳವಡಿಸಲಾಗಿದೆ. ಈ ಕಾಯಿದೆಯಿಂದ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು ತೆರಿಗೆಯ ಆದಾಯ ಬರುತ್ತಿಲ್ಲ. ಕೊಡುಗೆ ತೆರಿಗೆಯ ಜಾರಿಯಿಂದ ಸ್ವತ್ತು ಮತ್ತು ಆದಾಯಗಳ ಮೇಲೆ ಹಾಕಲಾಗುವ ತೆರಿಗೆಗಳ ಯೋಜನೆ ಪೂರ್ಣವಾದಂತಾಗಿದೆ. ಇಂಥ ತೆರಿಗೆಗಳ ದರಗಳು ಸಾಮಾಜಿಕ ಸಂಘಟನೆ ಮತ್ತು ಅವಶ್ಯಕತೆಗಳನ್ನವಲಂಬಿಸಿರುತ್ತವೆ. 				 (ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ